ಸಿಇಟಿ ರಿಸಲ್ಟ್; ಚುನಾವಣೆ ಫಲಿತಾಂಶ ನಂತರ ಘೋಷಣೆ ಸಾಧ್ಯತೆ

ಸಿಇಟಿ ಫಲಿತಾಂಶಕ್ಕೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲೇ ಮಂಡಳಿ ಕೆಲಸ ಮಾಡುತ್ತಿದೆ. ಮೇ 28ರೊಳಗೆ ನಾವು ಪಿಯು ಪರೀಕ್ಷೆ-2 ಫಲಿತಾಂಶ ಪ್ರಕಟಿಸಲು ಸಿದ್ದತೆ ನಡೆಸಿದ್ದೇವೆ. ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಕ್ಕೆ ಒಳಗಾಗುವುದು ಬೇಡ. ಸಾಧ್ಯವಾದಷ್ಟು ಬೇಗ ಫಲಿತಾಂಶ ಪ್ರಕಟಿಸುತ್ತೇವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಹೊಸ ಅಧ್ಯಕ್ಷಕರಾಗಿ ನೇಮಕಗೊಂಡ ಎನ್. ಮಂಜುಶ್ರೀ ಹೇಳಿದ್ದಾರೆ. ಲಕ್ಷಾಂತರ ಪಿಯು ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರಿಸಲ್ಟ್ ತಿಳಿಯಲು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೂ ಕಾಯಬೇಕು. ಏಕೆಂದರೆ ದ್ವಿತೀಯ ಪಿಯು ಪರೀಕ್ಷೆ-2 ಮತ್ತು ಜೆಕೆವಿಕೆ ಪ್ರಾಯೋಗಿಕ ಪರೀಕ್ಷೆ ಫಲಿತಾಂಶ ಬಾಕಿ ಇರುವುದರಿಂದ ಸಿಇಟಿ ಫಲಿತಾಂಶ ಬಿಡುಗಡೆಗೆ ವಿಳಂಬವಾಗಿದೆ. ಈ ಎರಡು ಪರೀಕ್ಷೆಯ ಫಲಿತಾಂಶ ಸಿಗುವ ವೇಳೆಗೆ ಲೋಕಸಭಾ ಫಲಿತಾಂಶ ಪ್ರಕಟವಾಗಲಿದ್ದು, ಇದಾದ ಬಳಿಕ ಉನ್ನತ ಶಿಕ್ಷಣ ಸಚಿವರ ಅನುಮೋದನೆ ಪಡೆದು ಫಲಿತಾಂಶ ಪ್ರಕಟಿಸಲು ಪ್ರಾಧಿಕಾರ ತೀರ್ಮಾನಿಸಿದೆ. ಅಂದಾಜಿನ ಪ್ರಕಾರ ಜೂನ್ 5 ಅಥವಾ 6ಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ

          ಜಿಕೆವಿಕೆ ಮೇ 14 ರಂದು ಪ್ರಾಯೋಗಿಕ ಪರೀಕ್ಷೆ ನಡೆಸಬೇಕಿತ್ತು. ಆದರೆ ಕಾರಣಾಂತರಗಳಿಂದ ಮೇ 25ಕ್ಕೆ ಮುಂದೂಡಿದೆ. ಇದರ ಫಲಿತಾಂಶ ಮೇ 30 ರಂದು ಪ್ರಕಟವಾಗಲಿದೆ. 18 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಹರಾಗಿದ್ದಾರೆ. ಇನ್ನೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಪ್ರಿಲ್ 29 ರಿಂದ ಮೇ 16 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಸಿದೆ. ಇದಕ್ಕೆ 1.49 ಲಕ್ಷ ವಿದ್ಯಾರ್ಥಿಗಳು ನೊಂದಾಯಿಸಿದ್ದರು. ಇದರ ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಮೇ 30 ರೊಳಗೆ ಫಲಿತಾಂಶ ಪ್ರಕಟಿಸುವ ವಿಶ್ವಾಸವನ್ನು ಮಂಡಳಿ ವ್ಯಕ್ತಪಡಿಸಿದೆ. ಒಟ್ಟಾರೆ ಮೇ 30ರ ವೇಳೆಗೆ ದ್ವಿತೀಯ ಪಿಯು ಪರೀಕ್ಷೆ-2 ಹಾಗೂ ಜೆಕಿವಿಕೆ ಪ್ರಾಯೋಗಿಕ ಪರೀಕ್ಷೆ ಫಲಿತಾಂಶ ಮೇ ತಿಂಗಳ ಕೊನೆಯ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸಿಇಟಿ ಫಲಿತಾಂಶ ಪ್ರಕಟಿಸಲು ಪ್ರಾಧಿಕಾರ ತೀರ್ಮಾನಿಸಿದೆ ಎಂದು ಉನ್ನತ ಶಕ್ಷಣ ಇಲಾಖೆಯ ಮೂಲಗಳು ಖಚಿತಪಡಿಸಿವೆ.

ಕಳೆದ ನಾಲ್ಕು ವರ್ಷಗಳಲ್ಲಿ ಸಿಇಟಿ ಮತ್ತು ಫಲಿತಾಂಶ ದಿನಾಂಕ ಗಮನಿಸಿದರೆ ಪ್ರತಿ ವರ್ಷಕ್ಕಿಂತ ಮೊದಲೇ ಪರೀಕ್ಷೆ ನಡೆಸಲಾಗಿದೆ. ಸಾಮಾನ್ಯವಾಗಿ ಮೇ ಅಥವಾ ಜೂನ್ ನಲ್ಲಿ ಪರೀಕ್ಷೆ ನಡೆಯುತ್ತಿತ್ತು. ಈ ಬಾರಿ ಎಪ್ರಿಲ್ ನಲ್ಲೇ ನಡೆಸಲಾಗಿದೆ. ಆದರೆ ಸಿ.ಇ.ಟಿ ಪರೀಕ್ಷೆ ಎಡವಟ್ಟಿನಿಂದಾಗಿ ಫಲಿತಾಂಶ ವಿಳಂಬವಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ-2: ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರೆಯವಂತಾಗಬೇಕು

          ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿ ಶೈಕ್ಷಣಿಕ ಬದುಕಿನ ಮುಖ್ಯ ಹಂತ. ಅಂಕದ ಆಧಾರದ ಮೇಲೆ ಮೊದಲ ಹಂತದಲ್ಲಿ ಯಾರು ಯಾವ ವಿಷಯದಲ್ಲಿ ಮುಂದಿನ ಶಿಕ್ಷಣವನ್ನು ಪಡೆಯಬೇಕು ಎನ್ನುವುದನ್ನು ನಿರ್ಧರಿಸಲು ಸಾಧ್ಯವಾಗುವುದು. ಈ ಬಾರಿ ಎಸ್ಸೆಸ್ಸಿಲ್ಸಿ ಹಾಜರಾತಿ ಕೊರತೆಯಿಂದ 26 ಸಾವಿರ ವಿದ್ಯಾರ್ಥಿಗಳು ಹಾಗೂ ಇನ್ನೀತರ ಕಾರಣಗಳಿಂದ 9 ಸಾವಿರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯಾವಾಗಿಲ್ಲ. ಅದಕ್ಕಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಮನವಿಯಲ್ಲಿ ಹಾಜರಾತಿ ಕೊರತೆ ಹಾಗೂ ವಿವಿಧ ಕಾರಣಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ದೂರ ಉಳಿದಿರುವ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಿ, ಯಾವುದೇ ಆತಂಕವಿಲ್ಲದೇ ಪರೀಕ್ಷೆ-2 ಎದುರಿಸಲು ‘ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್’ಗೆ ಒಳಪಡಿಸಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

          ಪೋಷಕರ ಅನಾರೋಗ್ಯದಿಂದ ತರಗತಿಗಳಿಗೆ ಹಾಜರಾಗದೇ ಇರುವುದು, ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕಿಂತ ಹೊಟ್ಟೆಪಾಡಿಗೆ ಮೊದಲ ಆಧ್ಯತೆಯನ್ನು ವಿದ್ಯಾರ್ಥಿಗಳು ನೀಡುತ್ತಿದ್ದಾರೆ. ಹಾಗೂ ವಿದ್ಯಾರ್ಥಿಗಳನ್ನು ಬಿಟ್ಟು ಬಿಡದೇ ಕಾಡುವ ಅನಾರೋಗ್ಯ ಸಮಸ್ಯೆ, ಬಡತನದಿಂದಾಗಿ ಕಾರ್ಮಿಕರು ಉದ್ಯೋಗವನ್ನು ಆರಿಸಿ ವಲಸೆ ಹೋಗುವಾಗ ತಮ್ಮ ಜೊತೆಯಲ್ಲಿಯೇ ಮಕ್ಕಳನ್ನು ಕರೆದುಕೊಂಡು ಹೋಗುವುದು, ಕೆಲ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಗಂಭೀರವಾಗಿ ಪರಿಗಣಿಸದೇ ನಿರಂತರವಾಗಿ ಶಾಲೆಗೆ ಕಳುಹಿಸದೇ ಕೆಲಸಕ್ಕೆ ಕಳುಹಿಸುವುದರಿಂದ ಹಾಜರಾತಿಯಲ್ಲಿ ಕೊರತೆ ಕಾಣಿಸಿಕೊಳ್ಳುತ್ತಿದೆ ಎಂದು ಆಯೋಗ ತಿಳಿಸಿದೆ.

ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಭಯ!

          ಹಾಜರಾತಿ ಕೊರತೆಯಿಂದ ದೂರ ಉಳಿದಿರುವವರಿಗೆ ವಿಷಯವಾರು ಜ್ಞಾನದ ಕೊರತೆ ಕಾಡುತ್ತಿದೆ. ಪುಸ್ತಕವನ್ನು ಓದಿಕೊಂಡು ಪರೀಕ್ಷೆ ಬರೆಯಲು ಮುಂದಾದರೂ, ಉತ್ತೀರ್ಣರಾಗುತ್ತೇವೆಯೋ ಇಲ್ಲವೋ ಎನ್ನುವ ಅನುಮಾನ ಅವರಲ್ಲಿದೆ. ಇದರಿಂದ ಅವರು ಮತ್ತೆ ಪರೀಕ್ಷೆಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚು. ಇಂತಹ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳ ಮೂಲಕ ಗುರುತಿಸಿ, ಅವರನ್ನು ಕೌನ್ಸಿಲಿಂಗ್ ಮಾಡಿ ಪರೀಕ್ಷೆ-2 ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಮಕ್ಕಳ ಹಕ್ಕುಗಳ ಆಯೋಗ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದೆ.

          ಇನ್ನೂ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತರಗತಿಯನ್ನು ನಡೆಸಲು ಸಲುವಾಗಿ ಇಲಾಖೆಯು ಸಹ ಶಿಕ್ಷಕರಿಗೆ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದೆ. ಆದರೆ ಈ ಆದೇಶವು ಶಿಕ್ಷಕರಲ್ಲಿ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಈ ಆದೇಶವನ್ನು ರದ್ದುಪಡಿಸಬೇಕೆಂದು ಕೆಲವು ಶಿಕ್ಷಕರ ಸಂಘಟನೆಯಿಂದ ಬಿಇಓಗೆ ಮನವಿ ಸಲ್ಲಿಸಿ ಆದೇಶ ಹಿಂಪಡೆಯಲು ಮನವಿ ಸಲ್ಲಿಸಿದ್ದಾರೆ. ಸಹ ಶಿಕ್ಷಕರು ಈ ವರ್ಷ ಎಪ್ರಿಲ್ ತಿಂಗಳಲ್ಲಿ ಬಹುತೇಕ ದಿನಗಳು ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾನ ಮಾಡಿದ್ದಾರೆ. ಅಲ್ಲದೆ ಚುನಾವಣಾ ಕರ್ತವ್ಯ ನಿರ್ವಹಿಸಿದ್ದಾರೆ. ಶೈಕ್ಷಣಿಕ ಅವಧಿಯಲ್ಲಿ ಶಿಕ್ಷಕರು ಪಾಠಬೋಧನೆ ಪರೀಕ್ಷೆಗಳ ಆಯೋಜನೆ, ಪ್ರತಿದಿನ ವಿಶೇಷ ತರಗತಿ ಇಷ್ಟೆಲ್ಲಾ ಕೆಲಸ ನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಇಲಾಖೆ ಹೊರತಾಗಿ ಸಿಕ್ಕಿರುವ ಮೇ ಒಂದೇ ತಿಂಗಳ ರಜೆ ಅವಧಿಯಲ್ಲಿ ಕುಟುಂಬ, ಮಕ್ಕಳ ಶೈಕ್ಷಣಿಕ ಪ್ರವೇಶ, ಮನೆ ಸ್ಥಳಾಂತರ, ವೈದ್ಯಕೀಯ ಚಿಕಿತ್ಸೆಗಳು ಪಡೆದುಕೊಳ್ಳು ಅನುಕೂಲವಾಗುವದಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ.

ಎಲ್.ಕೆ.ಜಿ ಪ್ರವೇಶಾತಿ: 4 ದಿನ ಕಡಿಮೆ ಇದ್ರೂ ಪ್ರವೇಶವಿಲ್ಲ

ಈ ತಿಂಗಳ ಅಂತ್ಯದಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭಗೊಳುತ್ತವೆ. ರಾಜ್ಯಾದ್ಯಂತ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ತವಕದಲ್ಲಿ ಇದ್ದಾರೆ.ಇದರ ನಡುವೆ ಎಲ್.ಕೆ.ಜಿ ದಾಖಲಾತಿಗೆ ಕಡ್ಡಾಯವಾಗಿ 4 ವರ್ಷ ಪೂರ್ಣಗೊಂಡಿರಲೇಬೇಕು ಎಂಬ ನಿಯಮ ಪೋಷಕರನ್ನು ಚಿಂತೇಗೇಡು ಮಾಡಿದೆ. ಕೆಲವು ಪೋಷಕರು ದಾಖಲೆ ಪತ್ರದಲ್ಲಿ ಮಗುವಿನ ಜನ್ಮ ದಿನಾಂಕವನ್ನೇ ಬದಲಿಸಲು ಮುಂದಾಗಿದ್ದಾರೆ. ಇನ್ನೂ ಕೆಲವರು ಮಕ್ಕಳ ಒಂದು ವರ್ಷದ ಭವಿಷ್ಯ ಹಾಳಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 2024-25 ನೇ ಸಾಲಿನಲ್ಲಿ ಎಲ್.ಕೆ.ಜಿಗೆ ದಾಖಲಾಗುವ ಮಗುವಿಗೆ 4 ವರ್ಷ, ಯುಕೆಜಿಗೆ ದಾಖಲಾಗುವ ಮಗುವಿಕೆ 5 ವರ್ಷ ಪೂರ್ಣ ತುಂಬಿರಬೇಕು. 1 ನೇ ತರಗತಿಗೆ ದಾಖಲಾಗುವ ಮಗುವಿಗೆ 5 ವರ್ಷ 7 ತಿಂಗಳು ತುಂಬಿದರೆ ಸಾಕು ಹಾಗೂ ಗರಿಷ್ಠ ಏಳು ವರ್ಷ ಮೀರುವಂತಿಲ್ಲ. ಈ ಸಾಲಿನಲ್ಲಿ ದಾಖಲಾಗುವ ಮಗುವಿಗೆ 6 ವರ್ಷ ವಯಸ್ಸು ತುಂಬಿರಲೇಬೇಕು. ಸರ್ಕಾರದ ಈ ನಿಯಮ ಮಕ್ಕಳ ಪಾಲಕರಿಗೆ ಮತ್ತು ಪೋಷಕರಿಗೆ ಚಿಂತಿಸುವಂತೆ ಮಾಡಿದೆ.

ಪೋಷಕರಿಂದ ಕೋರ್ಟ್ ಗೆ ಮೊರೆ!

2024-25 ನೇ ಸಾಲಿನಿಂದ 4 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ಎಲ್.ಕೆ.ಜಿ.ಗೆ ಸೇರಿಸಿಕೊಳ್ಳಬೇಕೆಂಬುದು ನಿಯಮ. 4 ವರ್ಷಕ್ಕೆ ಒಂದೆರಡು ತಿಂಗಳು, 20 ದಿನ ಅಥವಾ 10 ದಿನ ಕಡಿಮೆ ಇರುವ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಹಿಂದೆ ಇದ್ದಂತೆ 5 ವರ್ಷ 7 ತಿಂಗಳು ಆದವರಿಗೆ 1 ನೇ ತರಗತಿಗೆ ಅವಕಾಶ ನೀಡುವಂತೆಯೇ ಎಲ್.ಕೆ.ಜಿ, ಯುಕೆಜಿಗೆ ಈ ವರ್ಷ ದಾಖಲಾತಿಗೆ ಅವಕಾಶ ನೀಡುವಂತೆ ಕೆಲವು ಮಕ್ಕಳ ಪಾಲಕ, ಪೋಷಕರು ನ್ಯಾಯಾಲಯದ ಮೆಟ್ಟಿಲು ಏರೀದ್ದಾರೆ. ನ್ಯಾಯಾಯಲದ ನಿರ್ದೇಶನಕ್ಕೆ ಕಾಯುತ್ತಿದ್ದಾರೆ.

 ಮುಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಮಸ್ಯೆ

ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಅನಿವಾರ್ಯವಾಗಿ ಸರ್ಕಾರಿ ನಿಯಮ ಪಾಲನೆಗೆ ತೊಡಗಿದ್ದರೆ, ಇನ್ನು ಕೆಲವು ಸಂಸ್ಥೆಗಳು 4 ವರ್ಷ ಪೂರ್ಣಗೊಳ್ಳದ ಮಕ್ಕಳನ್ನು ಎಲ್ಕೆಜಿಗೆ ಸೇರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈಗಿನ ನಿಯಮದ ಪ್ರಕಾರ 10ನೇ ತರಗತಿ ಪರೀಕ್ಷೆ ಬರೆಯಲು 15 ವರ್ಷ ಆಗಿರಬೇಕು. ಈಗ 4 ವರ್ಷ ತುಂಬಿರದ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಂಡರೆ ಅವರು 10 ನೇ ತರಗತಿ ಪರೀಕ್ಷೆ ಬರೆಯುವಾಗ ಸಮಸ್ಯೆ ಎದುರಾಗಲಿದೆ. ಹೀಗಾಗಿ ಬಹುತೇಕ ಶಾಲೆಗಳು ಭವಿಷ್ಯದಲ್ಲಿ ಮಕ್ಕಳಿಗೆ ಆಗಬಹುದಾದ ಸಮಸ್ಯೆಯನ್ನು ಪೋಷಕರಿಗೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸುತ್ತಿವೆ.

Leave a Reply

Your email address will not be published. Required fields are marked *