2024 ನೇ ಸಾಲಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ದಾಖಲಾತಿ ಮಾರ್ಗಸೂಚಿ ಹೊರಡಿಸಿದ್ದು, ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಜೂನ್ 01 ರಿಂದ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗುತ್ತವೆ.ಮಧ್ಯಂತರ ರಜೆಯು ದಿನಾಂಕ : 03-10-2024 ರಿಂದ 18-10-2024 ರವರೆಗೆ ಹಾಗೂ ಕೊನೆಯ ಕಾರ್ಯನಿರತ ದಿನಾಂಕ : 31-03-2025
ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ
ಪ್ರಥಮ ಪಿಯುಸಿ ದಾಖಲಾತಿ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾದ ನಂತರದ ಮೊದಲ ಕಾರ್ಯನಿರತ ದಿನದಿಂದ ಪ್ರಾರಂಭವಾಗುತ್ತದೆ. ಪ್ರಥಮ ಪಿಯುಸಿ ದಾಖಲಾತಿಗಾಗಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.
- ಇಲಾಖೆಯು ನಿಗದಿಪಡಿಸಿದ ಅರ್ಜಿ ನಮೂನೆ
- ಎಸ್.ಎಸ್.ಎಲ್.ಸಿ ಅಂಕಪಟ್ಟಿಗೆ ಶಾಲೆಯ ಮುಖ್ಯಸ್ಥರು ದೃಢೀಕರಿಸಿರಬೇಕು
- ಮೂಲ ವರ್ಗಾವಣೆ ಪತ್ರ
- ಇತ್ತೀಚಿನ ಪಾಸಪೋರ್ಟ್ ಅಳತೆಯ 06 ಭಾವಚಿತ್ರಗಳು (White Background ಇರಬೇಕು)
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥೀಗಳನ್ನು ಹೊರತುಪಡಿಸಿ ಇತರೆ ವಿದ್ಯಾರ್ಥಿಗಳು ಮೂಲ ವಲಸೆ ಪ್ರಮಾಣ ಪತ್ರ ಸಲ್ಲಿಸುವುದು.
ದಾಖಲಾತಿ ಸಂದರ್ಭದಲ್ಲಿ ಎಲ್.ಸಿ.(ವರ್ಗಾವಣೆ ಪ್ರಮಾಣ ಪತ್ರ) ಕೆಳೆದುಕೊಂಡಲ್ಲಿ ಹೀಗೆ ಮಾಡಿ
ಶಾಲೆಯಿಂದ ಮೂಲ ವರ್ಗಾವಣೆ ಪ್ರಮಾಣ ಪತ್ರ ಪಡೆದು ಪ್ರಥಮ ಪಿಯುಸಿ ತರಗತಿಗೆ ದಾಖಲಾಗುವ ಮೊದಲೇ ಅಚಾತುರ್ಯದಿಂದ ಮೂಲ ವರ್ಗಾವಣೆ ಪತ್ರವನ್ನು ಕಳೆದುಕೊಂಡಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ನಂತರ ಕಾಲೇಜುಗಳಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ದ್ವಿ-ಪ್ರತಿ ವರ್ಗಾವಣೆ ಪತ್ರ ಪಡೆದುಕೊಳ್ಳಬೇಕು.
ಪ್ರಥಮ ಪಿಯುಸಿ ತರಗತಿಗೆ ದಾಖಲಾದ ವಿದ್ಯಾರ್ಥಿಗಳ ಭಾಷೆ/ವಿಷಯಗಳ ಬದಲಾವಣೆ
ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳು ವಿಷಯ/ ಭಾಷೆಗಳ ಬದಲಾವಣೆಗೆ ಅಗಸ್ಟ್ 10, 2024 ರವರೆಗೆ ಕಾಲಾವಕಾಶ ಇರುತ್ತದೆ.ಆದರೆ ಕಾಲೇಜಿನ ಪ್ರಾಚಾರ್ಯರು ನೀವು 75% ಹಾಜರಾತಿ ಇರುವ ಬಗ್ಗೆ ಖಚಿತಪಡಿಸಿಕೊಂಡ ನಂತರ ನಿಮ್ಮ ವಿಷಯ/ಭಾಷೆಗಳ ಬದಲಾವಣೆಗೆ ಅವಕಾಶ ನೀಡುತ್ತಾರೆ.
ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆ
- ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು
- ಪ್ರಥಮ ಪಿಯುಸಿ ತರಗತಿಗಳನ್ನು ಅದೇ ಕಾಲೇಜಿನಲ್ಲಿ ಹಿಂದಿನ ವರ್ಷಗಳಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ವಿದ್ಯಾರ್ಥಿಗಳು
- ಹಿಂದಿನ ವರ್ಷಗಳಲ್ಲಿ ದ್ವಿತೀಯ ಪಿಯುಸಿಗೆ ದಾಖಲಾಗಿ ಹಾಜರಾತಿ ಕೊರತೆಯಿಂದ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ನಿರಾಕರಿಸಲ್ಪಟ್ಟ ವಿದ್ಯಾರ್ಥಿಗಳು
- ಪ್ರಥಮ ಪಿಯುಸಿಯನ್ನು ಬೇರೆ ಕಾಲೇಜಿನಲ್ಲಿ ಅಧ್ಯಯನ ಮಾಡಿ, ಈ ವರ್ಷ ಕಾಲೇಜು ಬದಲಾವಣೆ ಬಯಸುವ ವಿದ್ಯಾರ್ಥಿನಿಯರು, ಕಾಲೇಜು ಬದಲಾವಣೆ ನಮೂನೆಯನ್ನು ಸಲ್ಲಿಸುವುದು ಹಾಗೂ ರೂ. 1,600/-ಗಳನ್ನು ಕೆ-2 ಮೂಲಕ ಇಲಾಖೆಗೆ ತುಂಬಬೇಕು.
- ಪ್ರಥಮ ಪಿಯುಸಿಯನ್ನು ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾಗಿ ದ್ವಿತೀಯ ಪಿಯುಸಿಗೆ ದಾಖಲಾತಿ ಮಾಡದೇ ಇರುವ ವಿದ್ಯಾರ್ಥಿಗಳು ಇಲಾಖೆಯ ಕೇಂದ್ರ ಕಛೇರಿಯಿಂದ ಅನುಮತಿ ಪಡೆದುಕೊಂಡು ದ್ವಿತೀಯ ಪಿಯುಸಿಗೆ ದಾಖಲಾತಿ ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ
ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದು ಶಿಕ್ಷಣದ ಒಂದು ಅವಿಭಾಜ್ಯ ಪ್ರಕ್ರಿಯೆ ಆಗಿದೆ. ಈ ಶೈಕ್ಷಣಿಕ ಪ್ರವಾಸವನ್ನು ಡಿಸೆಂಬರ್ ತಿಂಗಳ ಕೊನೆಯ ವಾರದೊಳಗೆ ಏರ್ಪಡಿಸಲು ಇಲಾಖೆಯು ತಿಳಿಸಿದ್ದು, ಡಿಸೆಂಬರ್ ನಂತರ ಶೈಕ್ಷಣಿಕ ಪ್ರವಾಸ ಏರ್ಪಡಿಸಿದ್ದಲ್ಲಿ ಪ್ರಾಂಶುಪಾಲರೇ ಹೊಣೆಗಾರರಾಗಲಿದ್ದಾರೆ. ಶೈಕ್ಷಣಿಕ ಪ್ರವಾಸ ಏರ್ಪಡಿಸುವಾಗ ವಿದ್ಯಾರ್ಥಿಗಳ ಪೋಷಕರಿಂದ ಮುಚ್ಚಳಿಕೆ ಪತ್ರವನ್ನು ಕಡ್ಡಾಯವಾಗಿ ಕಾಲೇಜಿನವನ್ನು ಪಡೆದುಕೊಳ್ಳಬೇಕು. ಹಾಗೂ ಪ್ರವಾಸಕ್ಕಾಗಿ ಹೊರ ರಾಜ್ಯಗಳಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕರಿಂದ ಲಿಖಿತ ಅನುಮತಿಯನ್ನು ಕಾಲೇಜಿನ ಪ್ರಾಚಾರ್ಯರು ಪಡೆದುಕೊಳ್ಳುವುದು ಕಡ್ಡಾಯಾಗಿದೆ.