Telegram Join My Telegram WhatsApp Join My WhatsApp

ಭಾರತ–EU FTA: ಭಾರತೀಯ ವಸ್ತ್ರೋದ್ಯಮಕ್ಕೆ ಹೊಸ ಉಸಿರು; ಯುರೋಪ್ ಮಾರುಕಟ್ಟೆಯಲ್ಲಿ ಭಾರಿ ಅವಕಾಶ

ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವಿನ ಬಹುಕಾಲದಿಂದ ನಿರೀಕ್ಷಿತವಾಗಿದ್ದ ಮುಕ್ತ ವ್ಯಾಪಾರ ಒಪ್ಪಂದ (FTA) ಜನವರಿ 27ರಂದು ಸಹಿ ಆಗುತ್ತಿದ್ದಂತೆ, ದೇಶದ ಪ್ರಮುಖ ವಸ್ತ್ರ ಉದ್ಯಮ ಕೇಂದ್ರಗಳಲ್ಲಿ ಹೊಸ ಉತ್ಸಾಹದ ಅಲೆ ಎದ್ದಿದೆ. ತಿರುಪ್ಪೂರು, ಲೂಧಿಯಾನಾ, ಪಾಣಿಪಟ್, ನೋಯ್ಡಾ ಸೇರಿದಂತೆ ಹಲವು ಕ್ಲಸ್ಟರ್‌ಗಳಲ್ಲಿ ಈ ಒಪ್ಪಂದವನ್ನು “ಗೇಮ್ ಚೇಂಜರ್” ಎಂದು ಪರಿಗಣಿಸಲಾಗುತ್ತಿದೆ. ಸುಮಾರು 18 ವರ್ಷಗಳ ಚರ್ಚೆಗಳ ಬಳಿಕ ಅಂತಿಮಗೊಂಡ ಈ ಒಪ್ಪಂದವನ್ನು ಎರಡೂ ಪಕ್ಕದ ನಾಯಕರು “ಎಲ್ಲಾ ಒಪ್ಪಂದಗಳ ತಾಯಿ” ಎಂದು ಬಣ್ಣಿಸಿದ್ದಾರೆ.

ಭಾರತೀಯ ವಸ್ತ್ರ ಮತ್ತು ಉಡುಪು ರಫ್ತುಗಾರರು ವರ್ಷಗಳಿಂದ ಎದುರಿಸುತ್ತಿದ್ದ ದೊಡ್ಡ ಸಮಸ್ಯೆ ಎಂದರೆ ಯುರೋಪ್ ಮಾರುಕಟ್ಟೆಯಲ್ಲಿ ವಿಧಿಸಲಾಗುತ್ತಿದ್ದ 9ರಿಂದ 12 ಶೇಕಡಾ ವರೆಗೆ ಇದ್ದ ಸುಂಕ (ಟ್ಯಾರಿಫ್). ಈ ಕಾರಣದಿಂದ ಬಾಂಗ್ಲಾದೇಶ, ವಿಯೆಟ್ನಾಂ ಮತ್ತು ಟರ್ಕಿ ದೇಶಗಳೊಂದಿಗೆ ಸಮಾನವಾಗಿ ಸ್ಪರ್ಧಿಸುವುದು ಕಷ್ಟವಾಗಿತ್ತು. ಹೊಸ FTA ಒಪ್ಪಂದದೊಂದಿಗೆ ಈ ಟ್ಯಾರಿಫ್‌ಗಳನ್ನು ಸಂಪೂರ್ಣವಾಗಿ ಅಥವಾ ಹಂತ ಹಂತವಾಗಿ ತೆಗೆದುಹಾಕಲಾಗಿದ್ದು, ಭಾರತೀಯ ವಸ್ತ್ರೋದ್ಯಮಕ್ಕೆ ಬಹು ನಿರೀಕ್ಷಿತ ಸಮಾನ ಅವಕಾಶ ಒದಗಿಸಿದೆ.
ಸ್ಪಿನ್ನಿಂಗ್, ವೀವಿಂಗ್, ನಿಟ್ಟಿಂಗ್ ಮತ್ತು ಗಾರ್ಮೆಂಟಿಂಗ್ ಕ್ಷೇತ್ರಗಳಲ್ಲಿ 4.5 ಕೋಟಿ ಜನರಿಗೆ ಉದ್ಯೋಗ ನೀಡಿರುವ ಈ ವಲಯಕ್ಕೆ ಇದು ಐತಿಹಾಸಿಕ ಘಟ್ಟ. 2024–25 ಹಣಕಾಸು ವರ್ಷದಲ್ಲಿ ಭಾರತದ ವಸ್ತ್ರ ಮತ್ತು ಉಡುಪು ರಫ್ತು ಮೌಲ್ಯ ಸುಮಾರು 37 ಬಿಲಿಯನ್ ಡಾಲರ್ ಆಗಿದ್ದು, ದೇಶದ ಒಟ್ಟು ವಾಣಿಜ್ಯ ರಫ್ತುಗಳಲ್ಲಿ 8 ಶೇಕಡಕ್ಕೂ ಹೆಚ್ಚು ಪಾಲು ಹೊಂದಿದೆ. ಜಾಗತಿಕ ಮಟ್ಟದಲ್ಲಿ ಭಾರತ ವಸ್ತ್ರ ರಫ್ತಿನಲ್ಲಿ ಟಾಪ್ 6 ರಾಷ್ಟ್ರಗಳಲ್ಲಿ ಒಂದಾಗಿದೆ.

ಆದರೆ ಇಷ್ಟೊಂದು ಸಾಮರ್ಥ್ಯ ಇದ್ದರೂ, 2024ರಲ್ಲಿ ಯುರೋಪಿಯನ್ ಯೂನಿಯನ್‌ಗೆ ಭಾರತದ ರಫ್ತು ಕೇವಲ 7 ಬಿಲಿಯನ್ ಡಾಲರ್‌ಗಳಿಗೆ ಸೀಮಿತವಾಗಿತ್ತು. ಇದು ಯುರೋಪ್‌ನ 260 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ವಸ್ತ್ರ ಆಮದು ಮಾರುಕಟ್ಟೆಯಲ್ಲಿ ಸಣ್ಣ ಪಾಲು ಮಾತ್ರ. ಇದರ ಪ್ರಮುಖ ಕಾರಣವೇ ಹೆಚ್ಚಿನ ಟ್ಯಾರಿಫ್‌ಗಳು.
ಈಗ ಆ ಅಡ್ಡಿ ನಿವಾರಣೆಯಾಗಿದೆ. ಬಾಂಗ್ಲಾದೇಶಕ್ಕೆ ‘Everything But Arms’ ಯೋಜನೆಯಡಿ ಶೂನ್ಯ ಸುಂಕ ಸೌಲಭ್ಯ ಇದ್ದರೆ, ವಿಯೆಟ್ನಾಂ ಮತ್ತು ಟರ್ಕಿಗೆ ವಿಶೇಷ ವ್ಯಾಪಾರ ಒಪ್ಪಂದಗಳಿದ್ದವು. ಈಗ ಭಾರತವೂ ಅದೇ ಮಟ್ಟದ ಪ್ರವೇಶ ಪಡೆಯುತ್ತಿದೆ. ಇದರಿಂದ ಭಾರತೀಯ ಉತ್ಪನ್ನಗಳು ಯುರೋಪ್ ಮಾರುಕಟ್ಟೆಯಲ್ಲಿ ಬೆಲೆಗಿಂತ ಗುಣಮಟ್ಟ, ವಿನ್ಯಾಸ ಮತ್ತು ವಿಶ್ವಾಸಾರ್ಹತೆಯ ಆಧಾರದಲ್ಲಿ ಸ್ಪರ್ಧಿಸಬಹುದಾಗಿದೆ.

ಈ ಒಪ್ಪಂದದ ಸಮಯವೂ ಭಾರತಕ್ಕೆ ಅನುಕೂಲಕರವಾಗಿದೆ. 2025ರ ಸೆಪ್ಟೆಂಬರ್‌ಗೆ ಅಂತ್ಯವಾದ ಅರ್ಧ ವರ್ಷದಲ್ಲಿ, 111 ದೇಶಗಳಿಗೆ ಭಾರತದ ವಸ್ತ್ರ ರಫ್ತುಗಳು ಸುಮಾರು 10 ಶೇಕಡಾ ಏರಿಕೆಯಾಗಿದೆ. ರೆಡಿಮೇಡ್ ಗಾರ್ಮೆಂಟ್ಸ್, ಹತ್ತಿ ವಸ್ತ್ರಗಳು ಹಾಗೂ ಮಾನವ ನಿರ್ಮಿತ ನಾರುಗಳು ಈ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿವೆ.
ಅಮೆರಿಕದಲ್ಲಿ ಕೆಲವು ವಸ್ತ್ರಗಳ ಮೇಲೆ ವಿಧಿಸಿದ ಹೆಚ್ಚುವರಿ ಸುಂಕಗಳಿಂದ ಅಲ್ಲಿ ರಫ್ತು ಕುಗ್ಗಿದರೂ, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಪೂರ್ವ ಏಷ್ಯಾದ ಮಾರುಕಟ್ಟೆಗಳಲ್ಲಿ ಭಾರತ ತನ್ನ ಹಾಜರಾತಿಯನ್ನು ವಿಸ್ತರಿಸಿದೆ. ಈಗ EU ಒಪ್ಪಂದ ಜಾರಿಗೆ ಬಂದ ಮೇಲೆ, ಉದ್ಯಮ ತಜ್ಞರ ಅಂದಾಜು ಪ್ರಕಾರ ವಸ್ತ್ರ ರಫ್ತುಗಳು ವರ್ಷಕ್ಕೆ 20–25 ಶೇಕಡಾ ವೇಗದಲ್ಲಿ ಬೆಳೆಯುವ ಸಾಧ್ಯತೆ ಇದೆ. ಇದರಿಂದ 2030ರೊಳಗೆ 100 ಬಿಲಿಯನ್ ಡಾಲರ್ ರಫ್ತು ಗುರಿ ಸಾಧಿಸುವ ದಾರಿ ಸುಗಮವಾಗಲಿದೆ.

ಅರ್ವಿಂದ್, ಶಾಹಿ ಎಕ್ಸ್‌ಪೋರ್ಟ್ಸ್, ಕೆಪಿಆರ್ ಮಿಲ್ಸ್, ವೆಲ್ಸ್ಪನ್ ಮುಂತಾದ ದೊಡ್ಡ ಕಂಪನಿಗಳು ಈಗಾಗಲೇ automation, sustainability ಮತ್ತು traceability ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಿವೆ. ಸಣ್ಣ ಉತ್ಪಾದಕರು ಕೂಡ ತ್ಯಾಜ್ಯ ನೀರು ಮರುಬಳಕೆ, ಸ್ವಚ್ಛ ಇಂಧನ ಮತ್ತು ಡಿಜಿಟಲ್ ಅನುಸರಣೆ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ತಿರುಪ್ಪೂರಿನಂತಹ ಕ್ಲಸ್ಟರ್‌ಗಳಲ್ಲಿ ಈಗ ಶೇಕಡಾ 100ರಷ್ಟು ತ್ಯಾಜ್ಯ ನೀರು ಮರುಬಳಕೆ ಆಗುತ್ತಿರುವುದು, ಪರಿಸರ ಮಾನದಂಡಗಳನ್ನು ಪೂರೈಸುವ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿ.
ಈ ಒಪ್ಪಂದವು ಕೇಂದ್ರ ಸರ್ಕಾರದ ಕೈಗಾರಿಕಾ ತಂತ್ರಜ್ಞಾನದ ಜೊತೆಯಲ್ಲಿಯೇ ಸಾಗುತ್ತಿದೆ. ಮುಂದಿನ ರಾಷ್ಟ್ರೀಯ ಉತ್ಪಾದನಾ ಮಿಷನ್‌ನಲ್ಲಿ ಸ್ವಚ್ಛ ಮತ್ತು ಸ್ಥಿರ ಉತ್ಪಾದನೆಗೆ ಒತ್ತು ನೀಡಲಾಗಿದೆ. ಆದರೆ ಇನ್ನೂ ಸವಾಲುಗಳಿವೆ. ಕಾರ್ಮಿಕ ಉತ್ಪಾದಕತೆ, ಹೆಚ್ಚಿನ ಸಾಲದ ಬಡ್ಡಿದರ, 11 ಶೇಕಡಾ ಹತ್ತಿರ ಇರುವ ಲಾಜಿಸ್ಟಿಕ್ಸ್ ವೆಚ್ಚಗಳು ರಫ್ತಿಗೆ ಅಡ್ಡಿಯಾಗುತ್ತಿವೆ. ಟ್ಯಾರಿಫ್ ನಿವಾರಣೆಯಿಂದ ಸಿಕ್ಕಿರುವ ‘breathing space’ ಈ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಲಿದೆ ಎಂಬುದು ಉದ್ಯಮದ ನಿರೀಕ್ಷೆ.

ಇನ್ನೊಂದೆಡೆ, ಬಾಂಗ್ಲಾದೇಶ 2026 ನಂತರ Least Developed Country ಸ್ಥಾನದಿಂದ ಹೊರಬಂದ ಮೇಲೆ EUಯಲ್ಲಿ ಶೂನ್ಯ ಸುಂಕ ಸೌಲಭ್ಯ ಕಳೆದುಕೊಳ್ಳಲಿದೆ. ವಿಯೆಟ್ನಾಂನಲ್ಲಿ ವೇತನ ಏರಿಕೆ, ಟರ್ಕಿಯಲ್ಲಿ ಕರೆನ್ಸಿ ಅಸ್ಥಿರತೆ ಕೂಡ ಜಾಗತಿಕ ಬ್ರ್ಯಾಂಡ್‌ಗಳನ್ನು ಹೊಸ ಪರ್ಯಾಯಗಳತ್ತ ತಳ್ಳುತ್ತಿದೆ. ಈ ಸಂದರ್ಭದಲ್ಲಿ ಹತ್ತಿಯಿಂದ ಹಿಡಿದು ಅಂತಿಮ ಉಡುಪುಗಳವರೆಗೆ ಸಂಪೂರ್ಣ value chain ಹೊಂದಿರುವ ಭಾರತ, ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮುತ್ತಿದೆ.ಯುರೋಪ್ ಮಾರುಕಟ್ಟೆ ಭಾರತದ ವಸ್ತ್ರೋದ್ಯಮಕ್ಕೆ ಕೇವಲ ದೊಡ್ಡದಷ್ಟೇ ಅಲ್ಲ, ಸ್ಥಿರ ಮತ್ತು ಪ್ರೀಮಿಯಂ ಮಾರುಕಟ್ಟೆಯೂ ಹೌದು. ರಾಜಸ್ಥಾನ, ಗುಜರಾತ್, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳ ಉದ್ಯಮಿಗಳಿಗೆ ಇದು ಹೊಸ ಅವಕಾಶಗಳ ಬಾಗಿಲು ತೆರೆದಿದೆ.

ದಶಕಗಳ ಕಾಲ ಅಪಾರ ಸಾಮರ್ಥ್ಯ ಇದ್ದರೂ ಅಡ್ಡಿಗಳಲ್ಲಿ ಸಿಲುಕಿದ್ದ ಭಾರತೀಯ ವಸ್ತ್ರೋದ್ಯಮಕ್ಕೆ, ಭಾರತ–EU FTA ಹೊಸ ಕಥೆ ಬರೆಯುವ ಅವಕಾಶ ನೀಡಿದೆ. ಮುಂದಿನ ದಿನಗಳಲ್ಲಿ ‘Made in India’ ಟ್ಯಾಗ್ ಯುರೋಪ್‌ನ ಫ್ಯಾಷನ್ ರಾಜಧಾನಿಗಳಲ್ಲಿ ಕೇವಲ ಕಡಿಮೆ ಬೆಲೆಯ ಸಂಕೇತವಲ್ಲ, ಬದಲಾಗಿ ಜವಾಬ್ದಾರಿ, ವಿಶ್ವಾಸ ಮತ್ತು ಪುನರುಜ್ಜೀವನದ ಪ್ರತೀಕವಾಗುವ ಸಾಧ್ಯತೆ ಇದೆ.